ಬಿಂದು ಸರೋವರ -
ಒಂದು ತೀರ್ಥ. ಇದರ ಮರಳು ಸುವರ್ಣಮಯವಾಗಿದೆ. ಭಗೀರಥ ಗಂಗೆಯನ್ನು ಭೂಲೋಕಕ್ಕೆ ತರಲು ಇಲ್ಲಿ ತಪಸ್ಸು ಮಾಡಿದ. ಅವನ ಬೇಡಿಕೆಯಂತೆ ಆಕಾಶದಿಂದ ವೇಗವಾಗಿ ಇಳಿಯುತ್ತಿದ್ದ ಗಂಗೆಯ ದುರುದ್ದೇಶವನ್ನು ತಿಳಿದ ಶಂಕರ ಅವಳನ್ನು ತನ್ನ ಜಟಾಜೂಟದಲ್ಲಿ ಬಂಧಿಸಿದ. ಅವಳಿಗೆ ಕೋಪ ಬಂದಿತು. ಪರಿಣಾಮವಾಗಿ ನೆಲದ ಮೇಲೆ ಕೆಲವು ಬಿಂದುಗಳು ಬಿದ್ದು ಸರೋವರವಾಯಿತು. ಈ ಕಾರಣದಿಂದ ಇದಕ್ಕೆ ಬಿಂದು ಸರಸ್ಸು ಅಥವಾ ಬಿಂದು ಸರೋವರ ಎನ್ನುವರು. ಮಹಾಭಾರತದಲ್ಲಿ ಧರ್ಮರಾಯ, ರಾಜಸೂಯಯಾಗ ಮಾಡುವ ಸಂದರ್ಭದಲ್ಲಿ, ಸಭಾಮಂದಿರ ನಿರ್ಮಾಣಕ್ಕೆ ಮಯ ಇಲ್ಲಿಂದ ರತ್ನಗಳನ್ನು ಕೊಂಡು ಹೋಗಿ ಪಾಂಡವರಿಗೆ ಸಭೆಯನ್ನು ನಿರ್ಮಿಸಿಕೊಟ್ಟ ಎನ್ನಲಾಗಿದೆ. ಭಾಗವತದ ಹೇಳಿಕೆಯಂತೆ ಕರ್ದಮ ಮುನಿ ಇದರ ತೀರದಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದ.									
(ಎ.ಟಿ.ಡಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ